ಮಂಗಳೂರು, ನ.೩೦: ಸಿಡಿಪಿ ಯೋಜನೆಯಿಂದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರ ಅಧಿಕಾರ ಮೊಟಕುಗೊಂಡಿದೆ. ಬಡಜನರು ಕಟ್ಟಿಕೊಂಡ ಮನೆಗಳಿಗೆ ಮನೆ ನಂಬ್ರ ಕೊಡಲು ಅಧಿಕಾರ ಇಲ್ಲದ ಪರಿಷತ್ತಿನ ಸಭೆಗೆ ನಾವು ಹಾಜರಾಗುವುದಿಲ್ಲ ಎಂದು ವಿಪಕ್ಷ ಮುಖಂಡ ಹರಿನಾಥ್ ರೊಂದಿಗೆ ಕಾಂಗ್ರೆಸ್ ಪಕ್ಷದ ಎ ಸದಸ್ಯರು ಇಂದು ಸಂಜೆ ಮೇಯರ್ ಶಂಕರ್ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದರು.

ಮನಪಾ ಕಾನೂನಿನ ಪ್ರಕಾರ ಬಡವರ ಮನೆಗೆ ಮನೆನಂಬ್ರ ನೀಡಲು ಪಾಲಿಕೆಯ ಪರಿಷತ್ತು ತೀರ್ಮಾನ ಕೈಗೊಂಡರೂ ಅಧಿಕಾರಶಾಹಿ ಧೋರಣೆಯಿಂದ ಆ ತೀರ್ಮಾನ ಕಾರ್ಯಗತಗೊಳ್ಳದಿರುವ ಬಗ್ಗೆ ಬಿಜೆಪಿ ಸಹಿತ ವಿಪಕ್ಷ ಸದಸ್ಯರು ಇಂದು ಸಭೆಯ ಆರಂಭದಲ್ಲಿಯೇ ಮೇಯರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಭಾಗವಹಿಸಿದ ಶಾಸಕ ಯೋUಶ್ ಭಟ್ ಮಾತನಾಡಿ, ಬಡವರ ಮನೆಗಳಿಗೆ ಮನೆ ನಂಬ್ರ ನೀಡುವ ಅಧಿಕಾರ ಪರಿಷತ್ತಿಗಿದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಬಳಿಕ ಮನಪಾ ವ್ಯಾಪ್ತಿಯಲ್ಲಿ ಬಡವರು ಕಟ್ಟಿ ವಾಸಿಸುತ್ತಿ ರುವ ಮನೆಗಳಿಗೆ ಮನೆನಂಬ್ರ ನೀಡುವ ನಿರ್ಣಯ ಮಾಡಲಾಯಿತು. ಆದರೂ ಈ ಬಗ್ಗೆ ಬಿಜೆಪಿ ಸದಸ್ಯರೇ ಅಸಮಾಧಾನ ಸೂಚಿಸಿದರು. ಮನಪಾ ಸದಸ್ಯ ಪ್ರೇಮನಾಥ ಶೆಟ್ಟಿ ಮಾತನಾಡಿ, ‘ಈ ತೀರ್ಮಾನ ಕಳೆದ ಸಭೆಯಲ್ಲೂ ಆಗಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ’ ಎಂದರು.

ಈ ಬಗ್ಗೆ ವಿವರಣೆ ನೀಡಿದ ಆಯುಕ್ತ ಡಾ.ವಿಜಯ ಪ್ರಕಾಶ್, ಸಿಡಿಪಿ ಯೋಜನೆ ಹಾಗೂ ಹಾಲಿ ನಿರ್ಣಯ ಅನುಷ್ಠಾನಗೊಳಿಸಿದರೆ ಅಕ್ರಮ-ಸಕ್ರಮ ಯೋಜನೆಯ ಅನುಷ್ಠಾನದಲ್ಲಿ ಗೊಂದಲ ಉಂಟಾಗಬಹುದು. ಆ ಕಾರಣದಿಂದ ಈ ಬಗ್ಗೆ ಸರಕಾರದಿಂದ ವಿವರಣೆ ಕೋರುವುದು ಸೂಕ್ತ ಮತ್ತು ಇದರ ದುರುಪಯೋಗ ಸಾಧ್ಯತೆ ಇದೆ ಎಂದರು.

ಸಿಡಿಪಿ ಯೋಜನೆಯ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಸುರೇಶ್ಕುಮಾರ್ರ ಜೊತೆ ಸಭೆ ನಡೆಸಿದ ಬಳಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಮೇಯರ್ ಶಂಕರ್ ಭಟ್ ಉತ್ತರ ನೀಡಿದಾಗ ಅತೃಪ್ತರಾದ ವಿಪಕ್ಷ ನಾಯಕ ಹರಿನಾಥ್ ಹಾಗೂ ಇತರ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.

ಸಭೆಯಲ್ಲಿ ಉಪ ಮೇಯರ್ ರಜನಿ ದುಗ್ಗಣ್ಣ, ಆಯುಕ್ತ ಡಾ. ವಿಜಯ ಪ್ರಕಾಶ್ ಉಪಸ್ಥಿತರಿದ್ದರು.